ಕಾಸ್‍ಬಕ್, ಜಾರ್ಜ್

 1866-1918. ರೂಮೇನಿಯದ ಕವಿ. ತಂದೆ ಹಳ್ಳಿಯೊಂದರಲ್ಲಿ ಅರ್ಚಕನಾಗಿದ್ದ. ಪದವೀಧರನಾದ ಮೇಲೆ ಈತ ಪತ್ರಿಕೋದ್ಯಮವನ್ನು ಪ್ರವೇಶಿಸಿ ಬುಕರೆಸ್ಟ್‍ನಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮೂರು ನಿಯತಕಾಲಿಕಗಳನ್ನು ಹೊರಡಿಸಿದ.

 ಬಾಳಿನ ಸೊಗಸು ಉಲ್ಲಾಸಗಳನ್ನು ಉತ್ಸಾಹದಿಂದ ಹಾಡುವ ಕವಿ ಈತ. ಮಣ್ಣಿನ ವಾಸನೆ ಈತನ ಸಾಹಿತ್ಯವನ್ನು ತುಂಬಿದೆ. ರೈತರ ನಿತ್ಯ ಜೀವನದಲ್ಲಿ ಈತನಿಗೆ ಅಪಾರ ಆಸಕ್ತಿ, ಸಂತೋಷ. ಅವರ ಭೂಮಿಯ ಪ್ರೇಮ ಇವನ ಕವನಗಳಲ್ಲಿ ಅಭಿವ್ಯಕ್ತಿ ಪಡೆಯಿತು. ಇವನದು ಶಕ್ತಿಯುತವಾದ ಶೈಲಿ: ತಿಳಿಹಾಸ್ಯ, ವಿಡಂಬನೆ ಬೆರೆತು ಬರಹಕ್ಕೆ ತೀಕ್ಷ್ಣತೆ ಬಂದಿದೆ. ಈತನ ಮಹಾನ್ ಕೃತಿಗಳೆನಿಸಿದ ಜಾನ್‍ಫಿರಾನ ವಿವಾಹ ಮತ್ತು ಫುಲ್‍ಗರ್‍ನ ಸಾವು ರೂಮೇನಿಯ ಕಾವ್ಯಜಗತ್ತಿನಲ್ಲಿನ ಉನ್ನತ ಶಿಖರಗಳೆನಿಸಿವೆ. ವಾಸ್ತವತೆಗೆ ಭವ್ಯ ಕಥನಕಲೆಯ ಮೆರುಗು ಕೊಟ್ಟು, ಯೂರೋಪಿನ ಶ್ರೇಷ್ಠ ಕಾವ್ಯಗಳ ಪಂಕ್ತಿಗೆ ಸೇರುವ ಕೃತಿಗಳನ್ನು ಈತ ಸೃಷ್ಟಿಸಿದ ವರ್ಜಿಲ್ ಮತ್ತು ಡಾಂಟೆಯರ ಕಾವ್ಯಗಳನ್ನೂ ಸುಂದರವಾಗಿ ಅನುವಾದ ಮಾಡಿದ. ಮಿಹಇಲ್ ಈಮಿನೆಸ್ಕುನ (1850-1889) ಕಾವ್ಯಜಗತ್ತು, ವಿಷಾದ ತುಂಬಿದುದಾಗಿದ್ದು ರೂಮೇನಿಯದ ಕವಿಗಳ ಮೇಲೆ ಗಾಢವಾದ ಪ್ರಭಾವ ಬೀರಿದುದರ ಪರಿಣಾಮವಾಗಿ ಒಂದು ಕವಿಪೀಳಿಗೆಯೇ ವಿಷಣ್ಣತೆಯ ಛಾಯೆಯಲ್ಲಿ ಮುಳುಗಿ ಹೋಗಿತ್ತಷ್ಟೆ. (ನೋಡಿ- ಈಮಿನೆಸ್ಕು,-ಮಿಹಇಲ್) ಇದನ್ನು ಮರೆಸಿ ಸಾಹಿತ್ಯ ಜಗತ್ತಿನಲ್ಲಿ ಹೊಸ ಉಲ್ಲಾಸ, ಜೀವನ ಶ್ರದ್ಧೆಗಳನ್ನು ಹರಡಿದವರೆಂದರೆ ವ್ಲಾಹುತ್ (1858-1917) ಮತ್ತು ಕಾಸ್‍ಬಕ್.

 

(ಎಲ್.ಎಸ್.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ